ದ್ವಾರಕಾ ಪ್ರತಿಷ್ಠಾನ(ರಿ.) ಪುತ್ತೂರು ಇದರ ಆಶ್ರಯದಲ್ಲಿ, ಕೃಷ್ಣಭಟ್ಟ ಪ್ರತಿಷ್ಠಾನ(ರಿ.) ಚೂಂತಾರು ಇದರ ಸಹಯೋಗದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಚಿತ ವಸಂತ ವೇದಪಾಠ ಶಿಬಿರದ ಉದ್ಘಾಟನಾ ಸಮಾರಂಭವು ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ದಿನಾಂಕ 12-4-2026ರಂದು ನೆರವೇರಿತು.
ವೈದಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಗಿ ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅಮೃತ ಕೃಷ್ಣ ಎನ್. ಅವರು ಗಣ್ಯರನ್ನು ಹಾಗೂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ವೇದಪಾಠ ಶಿಬಿರ ಆರಂಭಿಸುವ ಹಿಂದಿನ ಸ್ಫೂರ್ತಿ ಹಾಗೂ ಶಿಬಿರದ ವ್ಯವಸ್ಥೆಗಳ ಬಗ್ಗೆ ತಿಳಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕರಾದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು "ಯೋಗ ಇತ್ಯಾದಿಗಳು ನಮ್ಮ ಪೂರ್ವಜರು ನಮಗೆ ಕೊಟ್ಟ ಆಸ್ತಿಗಳಾಗಿವೆ. ಯೋಗದ ಅಭ್ಯಾಸ, ವೇದಮಂತ್ರಗಳ ಅಧ್ಯಯನ ಇತ್ಯಾದಿಗಳನ್ನು ಪಾಲಿಸುವ ಮೂಲಕ ನಾವು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಬೇಕು. ಸದಭಿರುಚಿಯ ಹವ್ಯಾಸಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವುದು ಅತ್ಯವಶ್ಯ. ದ್ವಾರಕಾ ಪ್ರತಿಷ್ಠಾನವು ವೇದ ಶಿಬಿರವನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದೆ. ಅದರ ಸದುಪಯೋಗ ಪಡೆಯುವ ಮೂಲಕ ನಮ್ಮ ಸಂಸ್ಕೃತಿ ಉಳಿಯಲಿ ಹಾಗೂ ಬೆಳೆಯಲಿ " ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದ ನಿವೃತ್ತ ಪ್ರಾಂಶುಪಾಲರು ಹಾಗೂ ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಗಣರಾಜ ಕುಂಬ್ಳೆ ಅವರು " ಉಪನಯನವು ಜೀವನದಲ್ಲಿರಬೇಕಾದ ಸಂಸ್ಕಾರ ಹಾಗೂ ಕಲಿಯಬೇಕಾದ ವಿಚಾರಗಳ ಬಗ್ಗೆ ನಮ್ಮನ್ನು ಜಾಗೃತರನ್ನಾಗಿಸುತ್ತದೆ. ವೇದ ಶಿಬಿರಗಳ ಮೂಲಕ ಕಲಿತವರ ನಡತೆಗಳು ತಿದ್ದಿ ತೀಡಿದ ರೂಪದಲ್ಲಿರುತ್ತದೆ. ಹಿರಿಯರಿಂದ ಕಿರಿಯರು ಹೇಗೆ ಕಲಿಯಬೇಕು, ಎಲ್ಲರೂ ಒಗ್ಗೂಡಿ ಹೇಗೆ ಕೆಲಸ ನಿರ್ವಹಿಸಬೇಕು ಹಾಗೂ ಒಗ್ಗಟ್ಟಿನಿಂದ ಬದುಕಬೇಕು ಎಂಬುದನ್ನು ಶಿಬಿರಗಳು ತಿಳಿಸಿಕೊಡುತ್ತದೆ. ನಮ್ಮ ಸಮಾಜ ಸುಸಂಸ್ಕೃತ ಹಾಗೂ ಸುಸಂಘಟಿತವಾಗಿರಬೇಕು. ಹಾಗೆ ಸಮೂಹದಲ್ಲಿ ಬದುಕಲು ಅಗತ್ಯವಾದ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಇಂತಹಾ ಶಿಬಿರಗಳು ನೆರವಾಗುತ್ತವೆ " ಎಂದರು.
ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಹರಿಕೃಷ್ಣ ಭಟ್ ಅರ್ತ್ಯಡ್ಕ ಅವರು ಅಧ್ಯಕ್ಷೀಯ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕೃಷ್ಣ ಭಟ್ಟ ಪ್ರತಿಷ್ಠಾನದ ಕಾರ್ಯದರ್ಶಿಗಳು ವೇದಪಾಠ ಶಿಬಿರದ ಮುಖ್ಯ ಪ್ರಾಚಾರ್ಯರಾದ ಶ್ರೀ ವೇ.ಮೂ ಶಿವಪ್ರಸಾದ್ ಭಟ್ ಚೂಂತಾರು ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ವೇದಪಾಠ ಶಿಬಿರದ ವೇದಾಧ್ಯಾಪಕರಾದ ಶ್ರೀ ವೇ.ಮೂ ದುರ್ಗಾಭಿರಾಮ ಭಟ್ಟ ಉಪಸ್ಥಿತರಿದ್ದರು.
ವೇದ ಅಧ್ಯಾಪಕರಾದ ಶ್ರೀ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಕು. ಧನ್ಯಶ್ರೀ ಮಿಂಚಿನಡ್ಕ ಅವರು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ವಸಂತ ವೇದಪಾಠ ಶಿಬಿರದ ಮುಖ್ಯ ಪ್ರಾಚಾರ್ಯರಾದ ಶ್ರೀ ವೇ.ಮೂ ಶಿವಪ್ರಸಾದ್ ಭಟ್ ಚೂಂತಾರು ಅವರ ನೇತೃತ್ವದಲ್ಲಿ ಗುರುವೃಂದದಲ್ಲಿರುವ ಶ್ರೀ ವೇ.ಮೂ ದುರ್ಗಾಭಿರಾಮ ಭಟ್ಟ, ಶ್ರೀ ನವೀನಕೃಷ್ಣ ಎಸ್. ಉಪ್ಪಿನಂಗಡಿ, ಹಾಗೂ ಶ್ರೀ ಆದಿತ್ಯ ಕೃಷ್ಣ ದ್ವಾರಕಾ ಅವರ ಉಪಸ್ಥಿತಿಯಲ್ಲಿ ವೇದಪಾಠಾರಂಭ ನಡೆಯಿತು.
ಶ್ರೀ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗದ ಪ್ರಾತ್ಯಕ್ಷಿಕೆ ಜರುಗಿತು.