ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಯೋಜನೆಯನ್ನಿಟ್ಟಿಕೊಂಡು ಅದನ್ನು ಕಾರ್ಯರೂಪಕ್ಕೆ ತರುತ್ತಿರುವ ಸಂಸ್ಥೆ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು. ಅದರ 2026ರ ವಾರ್ಷಿಕೋತ್ಸವ ‘ದ್ವಾರಕೋತ್ಸವ’ವು ದಿನಾಂಕ 1-2-2026ರಂದು ಮುಕ್ರುಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆಯಿತು.
ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಅವರು ಅತಿಥಿ ಅಭ್ಯಾಗತರನ್ನು ಹಾಗೂ ನೆರೆದ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಕೀಲರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಶ್ರೀ ಮಹೇಶ ಕಜೆ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು “ಬಡಾವಣೆಗಳನ್ನು ಕಟ್ಟಿಕೊಡುವುದರ ಜೊತೆಗೆ ಸಂಸ್ಕೃತಿಯನ್ನೂ ಪಸರಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ದ್ವಾರಕಾ ಸಂಸ್ಥೆಯನ್ನು ಪ್ರಶಂಸಿಸಬೇಕು. ಇತರರ ಕನಸನ್ನು ನಾವು ನನಸುಗೊಳಿಸುತ್ತೇವೆ ಎನ್ನಲು ಇಚ್ಛಾಶಕ್ತಿ ಇರಬೇಕಾಗುತ್ತದೆ. ಪರಂಪರೆಯಲ್ಲಿ ನಿರಂತರತೆ ಇರಬೇಕಾಗುತ್ತದೆ. ಹಾಗೆ ನಿರಂತರತೆ ಕಾಪಿಟ್ಟುಕೊಳ್ಳಬೇಕಾದರೆ ಪರಂಪರೆಯೊಂದಿಗೆ ಸಾತ್ವಿಕ ವಿಚಾರಗಳು ಮಿಳಿತಗೊಂಡಿರಬೇಕು” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ “ಸಮಾಜಕ್ಕೆ ಏನನ್ನಾದರೂ ನೀಡುವ ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯನ್ನು ದ್ವಾರಕಾ ಪ್ರತಿಷ್ಠಾನ ಉಳಿಸಿ ಬೆಳೆಸುತ್ತಿದೆ. ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುವ ಕೆಲಸ ಸಮಾಜದಲ್ಲಿ ಮನ್ನಣೆಯನ್ನು ಪಡೆಯುತ್ತದೆ” ಎಂದು ನುಡಿದರು.
ನಿವೃತ್ತ ಪ್ರಾಂಶುಪಾಲರಾದ ಶ್ರೀ ಬಿ. ವಿ. ಸೂರ್ಯನಾರಾಯಣ ಹಾಗೂ ಪುತ್ತೂರಿನ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಾಶಂಸನೆಗೈದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಹರಿಕೃಷ್ಣ ಭಟ್ಟ ಅರ್ತ್ಯಡ್ಕ ಅವರು “ಜೀವನದಲ್ಲಿ ಏನಾಗಬೇಕಿದ್ದರೂ ಅದಕ್ಕೆ ಕಾಲ ಕೂಡಿಬರಬೇಕಾಗುತ್ತದೆ. ಆಗ ನಾವು ಅಂದುಕೊಂಡದ್ದು ಸಾಧಿತವಾಗುತ್ತದೆ ” ಎಂದರು.

ಸಾಧಕರಿಗೆ ಸನ್ಮಾನ:-
ಈ ಸಂದರ್ಭದಲ್ಲಿ ವೈದಿಕ ವಿದ್ವಾಂಸರಾದ ಶ್ರೀ ಪರಕ್ಕಜೆ ಗಣೇಶ ಭಟ್ ಅವರಿಗೆ ‘ದ್ವಾರಕಾ ವೇದರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುತ್ತೂರಿನ ಎಸ್.ಡಿ.ಪಿ ರೆಮಿಡೀಸ್ ಇದರ ಡಾ.ಹರಿಕೃಷ್ಣ ಪಾಣಾಜೆ ಅವರನ್ನು ‘ದ್ವಾರಕಾ ವೈದ್ಯರತ್ನ’ ಅಭಿದಾನದೊಂದಿಗೆ ಗೌರವಿಸಲಾಯಿತು.
‘ದ್ವಾರಕಾ ನೃತ್ಯರತ್ನ’ ಎಂಬ ಪ್ರಶಸ್ತಿ ನೀಡಿ ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ದೀಪಕ್ ಕುಮಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾಸರಗೋಡಿನ ನೆಕ್ರಂಪಾರೆಯ ಸ್ಕಂದ ಪ್ಲ್ಯಾಸ್ಟಿಕ್ಸ್ ಇದರ ಮಾಲಕರಾದ ಶ್ರೀ ಮುರಳೀಕೃಷ್ಣ ಅವರಿಗೆ ‘ದ್ವಾರಕಾ ಉದ್ಯಮಿರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಗ್ರಂಥ ಅನಾವರಣ:-
ದ್ವಾರಕಾ ಪ್ರತಿಷ್ಠಾನದ ಅಂಗಸಂಸ್ಥೆ ದ್ವಾರಕಾ ಪ್ರಕಾಶನದಿಂದ ಪ್ರಕಟಗೊಂಡ ಹರಿಕೃಷ್ಣ ಭಟ್ಟ ಅರ್ತ್ಯಡ್ಕ ಅವರ ‘ಉತ್ತರನ ಜಂಬ’, ‘ಭಕ್ತಿ ತರಂಗ’ ಹಾಗೂ ‘ಒಗಟಿನ ಕೈಚೀಲ’ ಮತ್ತು ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ‘ಬಾಳಿನ ಬುತ್ತಿ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ‘ಬಾಳಿನ ಬುತ್ತಿ’ ಕೃತಿಯನ್ನು ಪರಿಚಯಿಸಿದರು.
ಗ್ರಂಥ ಅನಾವರಣಗೊಳಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರು ಹಾಗೂ ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಗಣರಾಜ ಕುಂಬ್ಳೆ ಅವರು “ಪುಸ್ತಕಗಳನ್ನು ಪ್ರಕಟಗೊಳಿಸುವುದು ವಿದ್ಯಾಧಿದೇವತೆ ಸರಸ್ವತಿಯ ಸೇವೆಯಂತೆ. ಕೃತಿಗಳನ್ನು ರಚಿಸುವುದು ಸ್ಥಿರವಾಗಿ ಉಳಿಯುವ ಕಾರ್ಯ. ಹಾಗೆಯೇ ಆ ಕೃತಿಗಳಿಂದಾಗಿ ನಾವು ಕೃತಿಕಾರರನ್ನು ನೆನಪಿಸಿಕೊಳ್ಳುತ್ತೇವೆ” ಎಂದರು.
ಪ್ರತಿಭಾ ಪುರಸ್ಕಾರ:-
ಕಾರ್ಯಕ್ರಮದಲ್ಲಿ ಭಾರತ ಸಂಸ್ಕೃತಿ ಪ್ರತಿಷ್ಠಾನ ಹಾಗೂ ದ್ವಾರಕಾ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ರಾಮಾಯಣ, ಮಹಾಭಾರತ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಂತೆಯೇ ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ದ್ವಾರಕಾ ಸಂಸ್ಥೆಯ ಶ್ರೀ ದುರ್ಗಾ ಗಣೇಶ್ ಕೆ.ವಿ ಅವರು ಪ್ರಾರ್ಥಿಸಿದರು. ಪಟ್ಟೆ ಶ್ರೀಕೃಷ್ಣ ಶಾಲೆಯ ಸಂಚಾಲಕರಾದ ವಿಘ್ನೇಶ್ ಹಿರಣ್ಯ ಅವರು ಧನ್ಯವಾದ ಸಮರ್ಪಿಸಿದರು. ಶ್ರೀದೇವಿ ಕುರಿಯ ಹಾಗೂ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವಿಚಾರ ಗೋಷ್ಠಿ:-
ಕಾರ್ಯಕ್ರಮದ ಅಂಗವಾಗಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಸಹಯೋಗದಲ್ಲಿ ‘ಸ್ವಾವಲಂಬನೆಗಾಗಿ ಆರ್ಥಿಕ ಹೂಡಿಕೆ’ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ ನಡೆಯಿತು.
ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ 27 ಅಂತಿಮ ಎಂ.ಕಾಂ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧವನ್ನು ಸಿದ್ಧಪಡಿಸಿದ್ದು ಅನನ್ಯಾ ಎಸ್, ನವೀನಕೃಷ್ಣ ಎಸ್. ಉಪ್ಪಿನಂಗಡಿ, ಪ್ರಿಯಾ, ಪವನ್ ರಾಜ್ ಹಾಗೂ ದೀಪಾಶ್ರೀ ಪ್ರಬಂಧ ಮಂಡಿಸಿದರು. ಗೋಷ್ಠಿಯ ಸಮನ್ವಯಕಾರರಾಗಿ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಬಿ. ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಶ್ರೀ ಗಣರಾಜ ಕುಂಬ್ಳೆಯವರು ನಿರ್ವಹಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್ ಪ್ರೈ.ಲಿ ಇದರ ಮುಖ್ಯಸ್ಥರಾದ ಕುಂಬ್ಳೆ ನರಸಿಂಹ ಪ್ರಭು ಅವರು ತಮ್ಮ ವೀಡಿಯೋ ಸಂದೇಶದಲ್ಲಿ “ಸಂಪಾದನೆ ಮಾಡಿದ ಹಣದಲ್ಲಿ ಒಂದು ಭಾಗವನ್ನು ಉಳಿತಾಯ ಹಾಗೂ ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿ ಲಭಿಸಿದ ಮೊತ್ತದಲ್ಲಿ ಭೂಮಿ ಖರೀದಿ ಇತ್ಯಾದಿ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಬಹುದು” ಎಂದು ಹೇಳುತ್ತಾ ಪುತ್ತೂರು ಪರಿಸರದಲ್ಲಿ ಹೂಡಿಕೆ, ಸ್ಟಾರ್ಟಪ್ ಇತ್ಯಾದಿಗಳಿಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿದರು. ವಿಚಾರ ಗೋಷ್ಠಿಗೆ ಪೂರಕವಾಗಿ ಡಾ. ಶ್ರೀಪತಿ ಕಲ್ಲೂರಾಯ ಅವರ ರಿಯಲ್ ಎಸ್ಟೇಟ್ ಹೂಡಿಕೆ : ಆರ್ಥಿಕ ಸ್ವಾವಲಂಬನೆಗೆ ದಾರಿದೀಪ ಎಂಬ ವಿಷಯದ ಬಗ್ಗೆ ಪೊಡ್ಕಾಸ್ಟ್ ಪ್ರಸಾರಗೊಂಡಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:-
ಈ ಸಂದರ್ಭದಲ್ಲಿ ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ ಹಾಗೂ ಯಕ್ಷಗಾನ ಹಿಮ್ಮೇಳದ ಅಬ್ಬರತಾಳ, ಗಾನವೈಭವ ಪ್ರಸ್ತುತಗೊಂಡಿತು.
ಪಟ್ಟೆ ಶ್ರೀಕೃಷ್ಣ ಶಾಲೆಯ ಶಾಲೆಯ ವಿದ್ಯಾರ್ಥಿಗಳಿಂದ ‘ಕಲಾರಾಧನೆ’ ಎಂಬ ಪರಿಕಲ್ಪನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಝೀ ಕನ್ನಡ ಸ ರಿ ಗ ಮ ಪ ಖ್ಯಾತಿಯ ಅಖಿಲಾ ಪಜ್ಜಿಮಣ್ಣು ಹಾಗೂ ಬಳಗದವರಿಂದ ‘ಗಾನ ರಸಧಾರೆ’ ಕಾರ್ಯಕ್ರಮ ನಡೆಯಿತು. ಪುತ್ತೂರು ಮುಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಅವರ ತಂಡದಿಂದ ‘ಶಂಭೋ ಸ್ವಯಂಭೋ’ ಪರಿಕಲ್ಪನೆಯ ಭರತನಾಟ್ಯ ಪ್ರದರ್ಶನ ನೆರವೇರಿತು. ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ‘ಭೂಮಿಪುತ್ರ’ ಆಖ್ಯಾನದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ದ್ವಾರಕಾ ಕಲಾಶಾಲೆಯ ವಾರ್ಷಿಕೋತ್ಸವ, ದ್ವಾರಕಾ ಸಂಸ್ಥೆಯ ಗ್ರಾಹಕರು, ಹಿತೈಷಿಗಳ ಸಮಾಗಮವಾಗಿ ದ್ವಾರಕೋತ್ಸವ ಸಂಪನ್ನಗೊಂಡಿತು.
ನೆರೆದ ಸರ್ವರಿಗೂ ಊಟೋಪಹಾರದ ವ್ಯವಸ್ಥೆಗಳಿದ್ದವು.