ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಸಮಾರಂಭ

May 11, 2026
Closing ceremony free vasantha vedic learning camp

ದ್ವಾರಕಾ ಪ್ರತಿಷ್ಠಾನ(ರಿ.) ಪುತ್ತೂರು ಇದರ ಆಶ್ರಯದಲ್ಲಿ ಕೃಷ್ಣ ಭಟ್ಟ ಪ್ರತಿಷ್ಠಾನ (ರಿ.) ಚೂಂತಾರು ಇದರ ಸಹಕಾರದೊಂದಿಗೆ ಉಚಿತ ನಡೆದ ವಸಂತ ವೇದಪಾಠ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 10-5-2026ರಂದು ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನೆರವೇರಿತು.

ವೈದಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನೆರೆದ ಸರ್ವರನ್ನೂ ಹಾಗೂ ಗಣ್ಯರನ್ನು ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀ ಡಾ. ಧನಂಜಯ ಕುಂಬ್ಳೆ ಅವರು ಸಮಾರೋಪ ಭಾಷಣವನ್ನು ಮಾಡಿ ” ಶ್ರೇಷ್ಠ ವಿಚಾರಗಳನ್ನು ಗಳಿಸಿಕೊಳ್ಳುವ ಕಾರ್ಯ ಉಪನಯನ ಸಂಸ್ಕಾರದ ನಂತರ ಆರಂಭವಾಗುತ್ತದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ನೀಡಿ ಬದುಕಿನಲ್ಲಿ ಮುನ್ನಡೆಯಲು ಪ್ರೇರೇಪಿಸಬೇಕು.ನಮ್ಮ ಪಠ್ಯಕ್ರಮಗಳಲ್ಲಿ ವೇದಮಂತ್ರಗಳ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಸೇರ್ಪಡೆಗೊಳಿಸುವುದು ಅತ್ಯಗತ್ಯ. ನಾವೆಲ್ಲರೂ ಸಂಘಟಿತರಾಗಿ ಒಳ್ಳೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ನಮ್ಮ ಪ್ರದೇಶಗಳನ್ನು ಸುಸಂಸ್ಕೃತವಾಗಿ ರೂಪಿಸಬೇಕು” ಎಂದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಭೂಗರ್ಭಶಾಸ್ತ್ರಜ್ಞರು, ಕೃಷಿಕರು ಹಾಗೂ ಸಾಹಿತಿಗಳಾದ ಶ್ರೀ ಮಧುರಕಾನನ ಗಣಪತಿ ಭಟ್ಟ ಅವರು ಮಾತನಾಡಿ “ಮಕ್ಕಳು ಸುಶಿಕ್ಷಿತರಾದರೆ ಸಮಾಜ ಜಾಗೃತವಾದಂತೆ. ಸಮಾಜ ಜಾಗೃತಗೊಂಡರೆ ದೇಶ ಪ್ರಗತಿಯೆಡೆಗೆ ಸಾಗಬಹುದು. ಕಲಿಕೆ, ನಿತ್ಯದ ಅನುಷ್ಠಾನಗಳೊಂದಿಗೆ ಕೃಷಿ ಕಾರ್ಯದಲ್ಲೂ ಆಸಕ್ತಿ ವಹಿಸುವುದು ಮುಖ್ಯ. ಸ್ವಂತಿಕೆ, ಸಮಯಪಾಲನೆ ಇತ್ಯಾದಿ ಗುಣಗಳನ್ನು ರೂಢಿಸಿಕೊಂಡಾಗ ಬದುಕು ಸುಖಮಯವಾಗುತ್ತದೆ” ಎಂದು ನುಡಿದರು.

ವೈದಿಕರು ಹಾಗೂ ಶಿಬಿರದ ವೇದಾಧ್ಯಾಪಕರಾದ ಶ್ರೀ ದುರ್ಗಾಭಿರಾಮ ಭಟ್ಟ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ” ವೇದವಿದ್ಯೆ ಎಂಬುದು ಅತ್ಯಂತ ಪವಿತ್ರವಾಗಿದ್ದು ಸದಾಕಾಲ ಅಭ್ಯಾಸ ಮಾಡುವುದು ಅವಶ್ಯಕ. ತಂದೆ ತಾಯಿಯರ ಆಶಿರ್ವಾದ ನಮ್ಮ ಯಶಸ್ಸಿಗೆ ತುಂಬಾ ಮುಖ್ಯ” ಎಂದು ತಿಳಿಸಿದರು. ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಹರಿಕೃಷ್ಣ ಭಟ್ ಅರ್ತ್ಯಡ್ಕ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಹಿರಿಯ ವೈದಿಕ ಪರಿಚಾರಕರಾದ ಶ್ರೀ ಮಾರ್ಗ ತಿರುಮಲೇಶ್ವರ ಭಟ್ಟ ಅವರನ್ನು ಕೃಷ್ಣಭಟ್ಟ ಪ್ರತಿಷ್ಠಾನ (ರಿ.), ಚೂಂತಾರು ಇದರ ವತಿಯಿಂದ ಸನ್ಮಾನಿಸಲಾಯಿತು. ವೇದ ಶಿಬಿರದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಿ ಅಭಿನಂದಿಸಲಾಯಿತು. ವಸಂತ ವೇದಪಾಠ ಶಿಬಿರದ ಗುರುವೃಂದದವರನ್ನು, ಸಂಯೋಜಕರನ್ನು, ಪಾಕಶಾಸ್ತ್ರಜ್ಞರನ್ನು ಹಾಗೂ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಗಣರಾಜ ಕುಂಬ್ಳೆ ಅವರು ಧನ್ಯವಾದ ಸಮರ್ಪಿಸಿದರು. ವೇದಾಧ್ಯಾಪಕರಾದ ಶ್ರೀ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ನಿರೂಪಣೆ ಮಾಡಿದರು.

Dwaraka Constructions Ad

Related Blog

karnataka volleyball team secures national runner up
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆ ಗಳ ವಿದ್ಯಾರ್ಥಿಗಳು ಕ್ಷೇತ್ರೀಯ ಮಟ್ಟದ ವಿದ್ಯಾ ಭಾರತಿ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ
guru prsshasti award fetured image
ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ